ಓಟಗಳು: ನಿಯತ ದೂರವನ್ನು ಆದಷ್ಟು ಕಡಿಮೆ ಕಾಲದಲ್ಲಿ ಕ್ರಮಿಸುವ ಒಂದು ಪಂದ್ಯಮಾದರಿ (ಟ್ರ್ಯಾಕ್ ಇವೆಂಟ್ಸ್‌). ಎಳೆಯುವರ ಆಟಗಳಲ್ಲಿ ಓಟವೂ ಸಹಜವಾಗಿ ಸೇರುತ್ತದೆ. ಲಗ್ಗೆ, ಕಣ್ಣಾಮುಚ್ಚಾಲೆ, ಹುಡದಿ, ಖೊಖೊ, ಗುರಿ ಚೆಂಡು ಮೊದಲಾದ ಆಟಗಳಲ್ಲಿ ಚುರುಕಿನ ಓಟ ಅಗತ್ಯ. ಹಿಂದೆ ಮಾನವ ತನ್ನ ಆತ್ಮರಕ್ಷಣೆಗಾಗಿಯೂ ಬೇಟೆಯನ್ನು ವಶಪಡಿಸಿಕೊಳ್ಳಲೂ ವೇಗವಾಗಿ ಓಡಬೇಕಿತ್ತು. ಈಚೆಗೆ ಓಟಗಳೂ ಲೋಕವಿಖ್ಯಾತ ಪಂದ್ಯಾಟಗಳಲ್ಲಿ ಬಹು ಮುಖ್ಯಭಾಗವೆನಿಸಿವೆ. ಪ್ರಾಣಿಗಳ ಮತ್ತು ವಾಹನಗಳ ನಡುವಿನ ಪಂದ್ಯಗಳನ್ನುಳಿದು ಕೇವಲ ಮನುಷ್ಯ ಮನುಷ್ಯರ ನಡುವಣ ಓಟದ ವಿಷಯವನ್ನು ಮಾತ್ರ ಇಲ್ಲಿ ಪರಿಶೀಲಿಸಿದೆ.

ಓಟಗಳಲ್ಲಿ ಅಂತರ ಕಡಿಮೆ ಇರುವ ಓಟ, ಹೆಚ್ಚು ದೂರದ ಓಟಗಳು, ಮಜಲು ಓಟ (ರಿಲೆ ರೇಸ್) ಮತ್ತು ಮ್ಯಾರಥಾನ್ ಓಟ ಎಂಬ ಭಾಗಗಳಿವೆ. ಕಡಿಮೆ ದೂರದ ಓಟಗಳಲ್ಲಿ ಅಂದರೆ 50, 75, 100, 200, 400 ಮೀಟರ್ ದೂರದಲ್ಲಿ ಅತಿ ಹೆಚ್ಚಿನ ವೇಗದಿಂದ ಓಡಬೇಕಾಗುವುದು. ಹೆಚ್ಚು ದೂರದ ಓಟದಲ್ಲಿ ಅಂದರೆ 800, 1500, 3000, 5000, 10,000 ಮೀಟರ್ ದೂರದಲ್ಲಿ ತುಂಬ ಸಹನೆ ಅಗತ್ಯ. ಓಟ ಸಿದ್ಧಿಸಬೇಕಾದರೆ ಅದರ ಪ್ರಾರಂಭ, ನಿರ್ವಹಣೆ ಮತ್ತು ಮುಕ್ತಾಯಗಳು ಯುಕ್ತವಾಗಿರಬೇಕಾಗುತ್ತದೆ.

ಓಟಗಾರ ಜಯಶೀಲನಾಗಲು ತ್ವರಿತದ ಆರಂಭ ಅವಶ್ಯ. ಈ ಆರಂಭದಲ್ಲಿ ಎರಡು ಮುಖ್ಯ  ವಿಧಾನಗಳಿವೆ; 1 ಬಂಚ, 2 ಮಧ್ಯಮ, ಸಮಾನ್ಯವಾಗಿ ಓಟದಲ್ಲಿ ಎದ್ದುನಿಂತ ಸ್ಥಿತಿಯಿಂದ ಆರಂಭ ಮಾಡುವುದಕ್ಕಿಂತ ನೆಲಕ್ಕೆ ಸಮವಾಗಿ ಬಾಗಿದ ಸ್ಥಿತಿಯಿಂದ ಆರಂಭಿಸುವುದು ಹೆಚ್ಚು ಒಳ್ಳೆಯದು.

ಓಡುವ ಮುನ್ನ ಪ್ರಾರಂಭದ ಗೆರೆಯ ಹಿಂದೆ, ಎದೆಯ ಅಂತರದಷ್ಟು ಅಗಲವಾಗಿ ನೆಲೆದ ಮೇಲೆ ಕೈಗಳನ್ನಿಟ್ಟು ಮೊಣಕಾಲುಗಳನ್ನೂರಿ ಬೆನ್ನನ್ನು ನೆಲಕ್ಕೆ ಸಮಾನಾಂತರವಾಗಿರಿಸಿ ಅಂಬೆಗಾಲಿಕ್ಕಬೇಕು.  ತುದಿಗಾಲು ಗೆರೆಯ ಅಂಚಿನಲ್ಲಿರಬೇಕು. 

ಆರಂಭದ ರೇಖೆಯ ಹಿಂದೆ ಎರಡೂ ಬದಿಗಳಲ್ಲಿ ಸಾಕಷ್ಟು ಅಂತರ ಬಿಟ್ಟು ಹೆಬ್ಬೆಟ್ಟು ಒಳಗೆ ಮತ್ತು ಉಳಿದ ಬೆರಳುಗಳು ತ್ರಿಕೋನ ಆಕಾರದ ರೀತಿಯಲ್ಲಿ ಬೆರಳುಗಳ ಆಧಾರದ ಮೇಲೆ ಕೈಗಳನ್ನೂರಬೇಕು.

ಬಂದೂಕದ ಶಬ್ದ ಅಥವಾ ಸೀಟಿಯ ಶಬ್ದ ಕೇಳಿದ ಕೂಡಲೆ ಓಡುವಾತ ಮುಂದಿನ ಕಾಲನ್ನು ಸರಳಮಾಡಿ, ಎರಡು ಪಾದಗಳ ತುದಿಯಿಂದ ನೆಲವನ್ನು ಬಲವಾಗಿ ದೂಡಿ ಕೈಗಳನ್ನು ಬೀಸುತ್ತ ಮೊಣಕೈಗಳನ್ನು ಮಡಿಸಿ ಓಡಬೇಕು. ಕೈ ಮತ್ತು ಕಾಲುಗಳ ಚಲನೆಗೆ ಅತಿ ಹೆಚ್ಚು ಶಕ್ತಿಯನ್ನು ಉಪಯೋಗಿಸಬೇಕು.

ಅತಿ ವೇಗದಿಂದ ಓಡುವಾಗ ಓಟಗಾರ ಆರಂಭ ರೇಖೆಯಿಂದ 15-20 ಮೀಟರ್ ಅಂತರದಲ್ಲಿ ತನ್ನ ಪರಮಾವಧಿ ವೇಗವನ್ನು ಮುಟ್ಟುತ್ತಾನೆ. ಈ ಅಂತರದಲ್ಲಿ ಹೆಜ್ಜೆಗಳು ಕ್ರಮವಾಗಿ ಉದ್ದವಾಗುತ್ತವೆ. ಓಡುವಾಗ ದೇಹದ ಬಾಗು 250 ಇರಬೇಕು; ತೊಡೆಗಳನ್ನು ನೆಲಕ್ಕೆ ಸಮಾನಾಂತರವಾಗುವಷ್ಟು ಎತ್ತಬೇಕು. ಬೀಸಿದ ಪಾದ ಹಿಂದೆ ಕುಂಡೆಗಳಿಗೆ ತಗಲಬೇಕು.
ಮುಕ್ತಾಯದ ಘಟ್ಟ ಬಂದಾಗ ಹಿಂದಿನಂತೆ ಓಟವನ್ನು ಮುಂದುವರಿಸುತ್ತ ಮುಕ್ತಾಯದ ಗೆರೆಯ ಮೇಲೆ ಹಿಡಿದಿರುವ ದಾರವನ್ನು ಓಟಗಾರ ತನ್ನ ಎದೆಯಿಂದ ಮುಟ್ಟಬೇಕು.

ಓಡುವಾಗ ಯಾರೇ ಆಗಲಿ ತಮ್ಮ ಭುಜಗಳನ್ನು ಬಿಗಿ ಹಿಡಿಯಬಾರದು. ಬೆನ್ನನ್ನು ಡೂಗ (ಗೂನು) ಮಾಡಬಾರದು. ಓಡುವಾಗ ಎಡಬಲಕ್ಕಾಗಲಿ ಹಿಂದಕ್ಕಾಗಲಿ ನೋಡಬಾರದು. ನೇರ ಗುರಿಯಕಡೆಗೆ ಮುಖಮಾಡಿ ಓಡಬೇಕು.

ದೂರದ ಓಟಗಳಲ್ಲಿ ಭಾಗವಹಿಸುವಾಗ ಮಧ್ಯ ಅಂತರಗಳಲ್ಲಿ ಓಟದ ವೇಗವನ್ನು ಸಮಯಕ್ಕೆ ತಕ್ಕಂತೆ ಕಡಿಮೆ, ಹೆಚ್ಚು ಮಾಡಿಕೊಂಡು ಕೊನೆಯ ವೇಳೆಯಲ್ಲಿ 100 ಅಥವಾ 200 ಮೀಟರ್ ಇರುವಾಗ ವೇಗ ಓಟಗಳ ನಿಯಮದಂತೆ ಮುಕ್ತಾಯ ಮಾಡಬೇಕು.

 ಮಜಲು ಓಟ 
ಇವು 4 x 50  ಮೀ. 4 x 100 ಮೀ.  4 x 400 ಮೀ.ಗಳಲ್ಲಿರುತ್ತದೆ. ಈ ಓಟದ ಸ್ಪರ್ಧೆಯಲ್ಲಿ ವೇಗವಾಗಿ ಓಡುವ 4 ಓಟಗಾರರಿರಬೇಕು. ಜೊತೆಗೆ ದಂಡವನ್ನು (ಬ್ಯಾಟನ್) ಬದಲಿಸುವ ರೂಢಿ ಇರಬೇಕು. ಬದಲಾಯಿಸುವದರಲ್ಲಿ ಎರಡು ರೀತಿಗಳಿವೆ. 1. ನೋಡುತ್ತ ಬದಲಿಸುವುದು, 2. ನೋಡದೆ ಬದಲಿಸುವುದು. ಈ ದಂಡ ಬದಲಾವಣೆ ಗೊತ್ತಾದ ಅಂತರದೊಳಗೇ ಆಗಬೇಕಾದುದರಿಂದ ಆ ಗುಂಪಿನವರು ತಮ್ಮ ಪಕ್ಷ ಪಟು ಗೊತ್ತಾದ ಗುರುತನ್ನು ದಾಟಿದ ತತ್ಕ್ಷಣವೇ ಮುಂದೆ ಮುಖ ಹೊರಳಿಸಿ, ಸಾಧ್ಯವಾದಷ್ಟು ವೇಗದಿಂದ ಓಡಬೇಕು. ತನ್ನ ಬಲಗೈಯನ್ನು ಮೇಲೆ ಮಾಡಿ ಅಂಗೈಯನ್ನು ಚಾಚಿ ಓಡಬೇಕು. ಆಗ್ಗೆ ತನ್ನ ಪಕ್ಷದ ಓಟಗಾರ ತಂದ ದಂಡವನ್ನು ಚಾಚಿ ಬಲಗೈಯಲ್ಲಿ ಇಡುವನು. ಅನಂತರ ಆ ದಂಡವನ್ನು ಹಿಡಿದು ಓಡಬೇಕು.
ಮಜಲುಗಳ ಉದ್ದಳತೆಯನ್ನು ತೋರಿಸಲು ಮತ್ತು ಪ್ರಾರಂಭದ ರೇಖೆಯನ್ನು ತೋರಿಸಲು, ಸುಣ್ಣದ ಗೆರೆಗಳನ್ನು ಹಾಕಬೇಕು. ಮತ್ತು ಮಜಲಿನ ಪ್ರಾರಂಭರೇಖೆಯ ಹಿಂದೆ ಅಥವಾ ಮುಂದೆ 10 ಮೀ ಅಂತರದ ಮೇಲೆ ಬದಲಿಸುವ ಪ್ರದೇಶವನ್ನು ಬಣ್ಣದ ರಂಗೋಲಿಯಿಂದ ಗುರ್ತಿಸಬಹುದು. ಅಲ್ಲದೆ ಓಡುವ ಹಾದಿ 24 ಅಡಿ (7,32 ಮೀ) ಇರಬೇಕು; ಓಣಿಗಳು 4 ಅಡಿ ಅಗಲವಿರಬೇಕು.
ಮ್ಯಾರಥಾನ್ ಓಟ: ಓಡುವ ದೂರ 42,195 ಮೀ. ಅಥವಾ 26 ಮೈಲಿ 385 ಗಜವಿರುತ್ತದೆ. ಸಾಮಾನ್ಯವಾಗಿ ಈ ಪಂದ್ಯ ಕಠಿಣವಾದ ದೊಡ್ಡ ರಸ್ತೆಗಳಲ್ಲಿ ನಡೆಯುತ್ತದೆ. ಬಹುದೂರ ಓಡಬೇಕಾದ್ದರಿಂದ ಓಡುವಾತ ವೈದ್ಯರ ಸಲಹೆಯನ್ನು ಪಡೆದಿರಬೇಕಲ್ಲದೆ ಅರ್ಹತಾ ಪತ್ರವನ್ನೂ ಹೊಂದಿರಬೆಕು. ಈತನಿಗೆ ಮಧ್ಯದಲ್ಲಿ 11 ಕಿಮೀ ಅಥವಾ 7 ಮೈಲಿ ಆದ ಅನಂತರ ಕುಡಿಯಲು ನಿಯಮಕ್ಕನುಸಾರವಾಗಿ ಪಾನೀಯಗಳನ್ನು ಕೊಡಬಹುದು.

 ತಡಕೆ ಓಟ 
ಈ ಓಟದಲ್ಲಿ ಮಹಿಳೆಯರಿಗೆ 80 ಮೀ ಅಥವಾ 100 ಮೀ ಪುರುಷರಿಗೆ 100 ಮೀ ಅಥವಾ 400 ಮೀಗಳಲ್ಲಿ ಓಟವಿದೆ. ನಿಯತ ಸ್ಥಳಗಳಲ್ಲಿ ಎತ್ತರದ ತಡೆಗಳನ್ನು ಅಂದರೆ ಆತಂಕಗಳನ್ನು ದಾರಿಯುದ್ದಕ್ಕೂ ಇಟ್ಟಿರುತ್ತಾರೆ. ಓಡುವವ ಅವನ್ನು ದಾಟಿ ಹೋಗಬೇಕು. ಅಕ್ಕಪಕ್ಕದಿಂದಾಗಲಿ, ಕೆಳಗೆ ನುಸಿದಾಗಲೀ ಹೋಗುವಂತಿಲ್ಲ.
	(ಬಿ.ಎಲ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ